ಪೈಕ್, ಕೆನೆತ್ ಎಲ್ -
	9-6-1912. ಅಮೆರಿಕೆಯ ಹೆಸರಾಂತ ಭಾಷಾಶಾಸ್ತ್ರಜ್ಞ. ಹುಟ್ಟಿದ್ದು ಕನೆಕ್ಟೀಟ್‍ನ ವುಡ್‍ಸ್ಟಾಕ್‍ನಲ್ಲಿ. ತಂದೆ ವೈದ್ಯ. ಅಲಾಸ್ಕದಲ್ಲಿದ್ದ ಇಂಡಿಯನ್ ಮೂಲನಿವಾಸಿಗಳು ಬುಡಕಟ್ಟಿಗೆ ಕ್ರೈಸ್ತ ಧರ್ಮಪ್ರಚಾರ ಮಾಡಲು ಹೋದ ತಂದೆ ತಾಯಿಗಳು ಅನಾರೋಗ್ಯದ ನಿಮಿತ್ತ ಅಲ್ಲಿಂದ ಹಿಂತಿರುಗಿ ಹಳ್ಳಿಗಾಡುಗಳಲ್ಲಿ ಜನರ ಸೇವೆ ಮಾಡಲಾರಂಭಿಸಿದರು. ಹಾಗಾಗಿ ಈತನ ಏಳು ಮಂದಿ ಒಡಹುಟ್ಟಿದವರೂ ಸಣ್ಣ ಸಣ್ಣ ಊರುಗಳಲ್ಲಿಯೆ ಬೆಳೆದು ಮುಂದೆ ಬರಬೇಕಾಯಿತು.

	ಬಾಸ್ಟನ್ನಿನ ಗಾರ್ಡನ್ ಕಾಲೇಜಿನಲ್ಲಿ ಓದಿ ಬ್ಯಾಚೆಲರ್ ಇನ್ ತಿಯೊಲಜಿ ಪದವಿ ಪಡೆದು (1933) ಅಲ್ಲಿಯೆ ಧರ್ಮಪ್ರಚಾರಕನಾದ. ಮತಪ್ರಚಾರಕ್ಕಾಗಿ ಚೀನಕ್ಕೆ ಹೋಗಬೇಕಾದ ಪ್ರಸಂಗ ಎದ್ದಿತಾದರೂ ಕಾರ್ಯಗತವಾಗಲಿಲ್ಲ. ಮೆಕ್ಸಿಕೋದಲ್ಲಿ ಕೆಮೊರೆನ್ ಟಾನ್‍ಸೆಂಡ್ ಜೊತೆ ಸೇರಿ ಬೈಬಲ್ಲಿನ ಹೊಸ ಒಡಂಬಡಿಕೆಯ ಗ್ರೀಕ್ ಭಾಷಾಂತರಕ್ಕೆ ಕೈಹಾಕಿದ (1935). 1937ರಲ್ಲಿ ಲಿಂಗ್ವಿಸ್ಟಿಕ್ ಸೊಸೈಟಿ ಆಫ್ ಅಮೆರಿಕ ಸಂಸ್ಥೆ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಭಾಷಾಶಾಸ್ತ್ರ ತರಗತಿಗಳಿಗೆ ಹೋಗಿ ಅಧ್ಯಯನ ಮುಂದುವರಿಸಿದ.

	1942ರಲ್ಲಿ ಪಿ.ಎಚ್.ಡಿ ಪದವಿ ಪಡೆದ. ಎಡ್ವರ್ಡ್ ಸಪೀರನಂಥ ವಿದ್ವಾಂಸರ ಮಾರ್ಗದರ್ಶನದಲ್ಲಿ ಮಿಕ್ಸ್‍ಟೆಕ್ ಭಾಷೆಯ ತಾನವನ್ನು ವಿಶ್ಲೇಷಿಸುವ ತಂತ್ರವೊಂದನ್ನು ಅಭಿವೃದ್ಧಿಪಡಿಸಿದ. ಇದೇ ತಂತ್ರವನ್ನು ಬಳಸಿ ಇತರ ತಾನ ಭಾಷೆಗಳನ್ನು ವಿಶ್ಲೇಷಿಸುವಲ್ಲಿ ಇತರರಿಗೆ ನೆರವು ನೀಡಿದ. 1945-46ರಲ್ಲಿ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಲಾಯ್ಡ್ ಪೋಸ್ಟ್ ಡಾಕ್ಟರೇಟ್ ಫೆಲೋ ಆಗಿ ನೇಮಕಗೊಂಡ. ಅಲ್ಲೇ ಭಾಷಾಶಾಸ್ತ್ರದಲ್ಲಿ ಅಸೋಸಿಯೆಂಟ್ ಪ್ರೋಫೆಸರ್ ಆಗಿ ನೇಮಕಗೊಂಡ (1948). 1954ರಲ್ಲಿ ಪ್ರಾಧ್ಯಾಪಕನಾದ. ನಾರ್ಮನ್ನಿನಲ್ಲಿರುವ ಓಕ್ಲಹೋಮಾ ವಿಶ್ವವಿದ್ಯಾಲಯದ ಭಾಷಾಶಾಸ್ತ್ರಕ್ಕೆ ಸಂಬಂಧಪಟ್ಟ ಬೇಸಗೆ ಶಿಬಿರದ ಸಹ ನಿರ್ದೇಶಕನಾಗಿ ಕೆಲಸ ಮಾಡಿದ (1938-50). 1961ರಲ್ಲಿ ಲಿಂಗ್ವಿಸ್ಟಿಕ್ ಸೊಸೈಟಿ ಆಫ್ ಅಮೆರಿಕ ಸಂಸ್ಥೆಯ ಅಧ್ಯಕ್ಷನಾದ. ಅಂತರ ರಾಷ್ಟ್ರೀಯ ಧ್ವನಿ ವಿಜ್ಞಾನ ಸಂಘದ ಸ್ಥಾಯೀ ಸದಸ್ಯನಾಗಿ ನೇಮಕಗೊಂಡ. ಮಿಚಿಗನ್ ವಿಶ್ವವಿದ್ಯಾನಿಲಯ ಈತನ ಸಂಶೋಧನೆಗಳನ್ನು ಮೆಚ್ಚಿ ವಿಶೇಷವಾದ ಮನ್ನಣೆಯನ್ನಿತ್ತು ಗೌರವಿಸಿತು (1966). ಅಮೆರಿಕದ ಇಂಡಿಯಾನ ವಿಶ್ವವಿದ್ಯಾನಿಲಯದ ಹಟಂಗ್‍ಟನ್ ಕಾಲೇಜು ಮನವಿಕಗಳಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನಿತ್ತು ಸನ್ಮಾನಿಸಿತು (1967). 1968 ರ ವೇಳೆಗೆ ಯೂರೋಪ್, ಕೀಲ್, ಜರ್ಮನಿಗಳ ಬೇಸಗೆ ಭಾಷಾಶಾಸ್ತ್ರ ಸಂಸ್ಥೆಗಳಿಗೆ ಸಂದರ್ಶಕ ಪ್ರಾಧ್ಯಾಪಕನಾದ. ಕ್ಯಾಲಿಫೋರ್ನಿಯದ ಪಾಲೊ ಆಲ್ಟೊದಲ್ಲಿರುವ ವರ್ತನ ವಿಜ್ಞಾನಗಳ ಉನ್ನತ ಅಧ್ಯಯನ ಕೇಂದ್ರದಲ್ಲಿ ಫೆಲೊ ಆಗಿ ಕೆಲಸ ಮಾಡಿದ (1968-69).

	ಬೈಬಲ್ಲಿನಂಥ ಧರ್ಮಗ್ರಂಥದ ಭಾಷಾಂತರ ಮಾಡಬೇಕಾದರೆ ಗೊತ್ತಿಲ್ಲದ ಭಾಷೆಗಳನ್ನು ವಿಶ್ಲೇಷಿಸಿ ಹೇಗೆ ಭಾಷಾಂತರಕ್ಕೆ ಉಪಯೋಗಿಸಬಹುದೆಂಬುದರ ಬಗ್ಗೆ ತುಂಬ ಚಿಂತನೆ ಮಾಡಿದ. ಟೆನ್‍ಸೆಂಡನ ಸೊಸೆ ಈವಲಿನ್ ಗ್ರಿಸೆಟ್ಟಳನ್ನು ಮದುವೆಯಾದ. ಈತನಿಗೆ ಇಬ್ಬರು ಹೆಣ್ಣು ಮಕ್ಕಳು ಒಬ್ಬ ಮಗ.

	ಧ್ವನಿ ವಿಜ್ಞಾನ, ಉಪಭಾಷೆಗಳ ಅಧ್ಯಯನ, ವ್ಯಾಕರಣ, ಭಾಷಾ ಕಲಿಕೆ, ಸಾಹಿತ್ಯ ವಿಶ್ಲೇಷಣೆ, ಕೇಂದ್ರ ಕಾರ್ಯವಿಧಾನಗಳು, ಭಾಷಾಂತರ ಸಿದ್ಧಾಂತ ಮೊದಲಾದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಈತ ತುಂಬ ಬರೆದಿದ್ದಾನೆ. ಸಂಸ್ಕøತಿಯ ವಿಶ್ಲೇಷಣೆಯಲ್ಲಿ ಭಾಷಿಕ ತಂತ್ರಗಳು ಹೇಗೆ ನೆರವಾಗಬಲ್ಲವೆಂದು ತೋರಿಸಿಕೊಟ್ಟಿದ್ದಾನೆ. ಭಾಷಾಶಾಸ್ತ್ರಕ್ಕೆ ಸಂಬಂಧಿಸಿದ ಈತನ ಕೊಡುಗೆಗಳನ್ನು ಹೀಗೆ ಪಟ್ಟಿ ಮಾಡಬಹುದು. ತಾನಾ ಭಾಷೆಗಳ ವಿಶ್ಲೇಷಣೆಗೆ ಒಂದು ವಿಧಾನವನ್ನು ರೂಪಿಸಿದ. ಧ್ವನಿ ವಿಜ್ಞಾನದ ವಿನ್ಯಾಸವನ್ನು ಕುರಿತಂತೆ ಸಿದ್ಧಾಂತವೊಂದನ್ನು ಅಭಿವೃದ್ಧಿಪಡಿಸಿದ. ಅಮೆರಿಕನ್ ಇಂಗ್ಲಿಷ್ ಭಾಷೆಯಲ್ಲಿ ಕಂಡುಬರುವ ಧ್ವನಿಯ ಏರಿಳಿತಗಳನ್ನು ವಿಶ್ಲೇಷಿಸಿದ. ಹಾಗೆಯೇ ಧ್ವನಿಮಾಶಾಸ್ತ್ರವನ್ನು ಕುರಿತು ಈತ ಬರೆದ ಫೋನಿಮಿಕ್ಸ್ (1947) ಕೃತಿ ಭಾಷಾಶಾಸ್ತ್ರದ ವಿದ್ಯಾರ್ಥಿಗಳಿಗೆ ತುಂಬ ಉಪಯುಕ್ತವೆನಿಸಿತು.

	ಭಾಷಾಶಾಸ್ತ್ರಕ್ಕೆ ಸಂಬಂಧಪಟ್ಟಂತೆ ಟ್ಯಾಗ್ಮೆಮಿಕ್ ಸಿದ್ಧಾಂತವನ್ನು ರೂಪಿಸಿದವ ಈತನೇ. ಟ್ಯಾಗ್ಮೀಮ್ ಎಂಬುದು ಒಂದು ಅತ್ಯಂತ ಕನಿಷ್ಠ ವ್ಯಾಕರಣ ರೂಪ. ಅರ್ಥವಿಜ್ಞಾನವನ್ನು ಕುರಿತಂತೆ ಹಾಗೂ ಗಣಿತದ ತತ್ತ್ವಗಳನ್ನು ಪ್ರಕಲ್ಪನೆಗಳನ್ನು ಭಾಷಾ ವಿಶ್ಲೇಷಣೆಗೆ ಹೇಗೆ ಅಳವಡಿಸಬಹುದೆಂಬುದರ ಬಗ್ಗೆ ಈತ ಒಳ್ಳೆಯ ಕೆಲಸ ಮಾಡಿದ. ಈತನ ಸಿದ್ಧಾಂತಗಳು ಆದಷ್ಟೂ ವ್ಯವಹಾರಯೋಗ್ಯವಾಗಿವೆ. ಪ್ರಾಯೋಗಿಕವಾಗಿ ತನ್ನ ಸಿದ್ಧಾಂತಗಳನ್ನು ಅನ್ವಯಿಸಲು ಸಾಧ್ಯವಾಗುವಂತೆ ಅವನ್ನು ಸಾರ್ವತ್ರೀಕರಿಸಿರುವುದು ಈತನ ವೈಶಿಷ್ಟ್ಯ. ಇಟಲಿಯ ಬೊಲೊನದಲ್ಲಿ ನಡೆದ (1972) ಹನ್ನೆರಡನೆಯ ಅಂತರರಾಷ್ಟ್ರೀಯ ಭಾಷಾವಿಜ್ಞಾನಿಗಳ ಸಮ್ಮೇಳನದ ಒಂದು ಇಡೀ ಭಾಗ ಈತ ಪ್ರತಿಪಾದಿಸಿದ್ದ ಟ್ಯಾಗ್ಮೆಮಿಕ್ಸ್ ಸಿದ್ಧಾಂತಕ್ಕೇ ಮೀಸಲಾಗಿತ್ತು.
ಈತ ನೀಡುತ್ತಿದ್ದ ಏಕಭಾಷಾ ಪ್ರದರ್ಶನಗಳು ಎಲ್ಲರನ್ನೂ ವಿಸ್ಮಯಗೊಳಿಸಿದುವು. ಯಾದೃಚ್ಛಿಕವಾಗಿ ಸಭಿಕರ ಪೈಕಿ ಯಾರಾದರೂ ಮುಂದೆ ಬರುವಂತೆ ಕರೆದು ಆ ವ್ಯಕ್ತಿಯ ದೇಶವಾಗಲಿ ಭಾಷೆಯಾಗಲಿ ತನಗೆ ಗೊತ್ತಿಲ್ಲದಿದ್ದರೂ ಅವನಿಗೆ ಮಾತನಾಡ ಹೇಳಿ ಆತ ಮಾತನಾಡುತ್ತಿರುವಂತೆಯೇ ಅವನ ಮಾತುಗಳನ್ನು ಕೋಚುಕೋಚಾಗಿರುವ ಧ್ವನಿ ಲಿಪಿಯಲ್ಲಿ ಕಪ್ಪು ಹಲಗೆಗಳ ಮೇಲೆ ಬರೆದುಕೊಂಡು ಅನಂತರ ಸಂಜ್ಞೆಯನ್ನು ಮಾಡಿ ಕೆಲವಾರು ವಸ್ತುಗಳ ಹೆಸರುಗಳನ್ನು ಮತ್ತು ಗುಣವಾಚಕಗಳನ್ನು ಗುರುತು ಹಾಕಿಕೊಂಡು ಅನಂತರ ಬೇರೆ ಬೇರೆ ಕಪ್ಪು ಹಲಗೆಗಳ ಮೇಲೆ ಬರೆದುಕೊಂಡ ಪದಗಳ ರೂಪಗಳ ಆಧಾರದ ಮೇಲೆ ಕೂಡಲೆ ಆ ಗೊತ್ತಿಲ್ಲದ ಭಾಷೆಯಲ್ಲಿ ಮಾತನಾಡಲು ಪ್ರಾರಂಭಿಸುತ್ತಿದ್ದ. ಮೆಕ್ಸಿಕೋದಲ್ಲಿ ಮಿಕ್ಸ್‍ಟೆಕ್ ಭಾಷೆಯನ್ನು ಮಾತನಾಡುವವರ ನಡುವೆ ದುಭಾಷಿಯ ನೆರವಿಲ್ಲದೆ ಅನೇಕ ವರ್ಷಗಳನ್ನು ಕಳೆಯಬೇಕಾಗಿದ್ದಾಗ ಈ ತಂತ್ರವನ್ನು ಅನಿವಾರ್ಯವಾಗಿ ಈತ ರೂಢಿಸಿಕೊಂಡ. ಈ ಅವಧಿಯಲ್ಲೇ ಡೋನಾಲ್ಡ್ ಸ್ಟಾರ್ಕ್ ಎಂಬ ಸಹೋದ್ಯೋಗಿಯೊಡನೆ ಬೈಬಲ್ಲಿನ ಹೊಸ ಒಡಂಬಡಿಕೆಯನ್ನು ಮಿಕ್ಸ್‍ಟೆಕ್‍ನ ಉಪಭಾಷೆಯೊಂದಕ್ಕೆ ಭಾಷಾಂತರಿಸಿದ್ದು ಅಲ್ಲದೆ ಪೆರು, ಎಕ್ವಡಾರ್, ನ್ಯೂ ಗಿನಿ ಮತ್ತು ಫಿಲಿಪೀನ್ಸ್ ಪ್ರದೇಶಗಳ ಮೂಲನಿವಾಸಿಗಳ ಭಾಷೆಗಳನ್ನು ಅಧ್ಯಯನ ಮಾಡಿದ್ದು.

	1937 ರಿಂದಲೇ ಭಾಷಾಶಾಸ್ತ್ರಕ್ಕೆ ಸಂಬಂಧಪಟ್ಟಂತೆ ಲೇಖನಗಳನ್ನು ಬರೆಯಿಸಲಾರಂಭಿಸಿದ ಈತ ಅನಂತರದ ವರ್ಷಗಳಲ್ಲಿ ಸುಮಾರು 11 ಭಾಷಾಶಾಸ್ತ್ರ ಕೃತಿಗಳನ್ನು 85 ವಿದ್ವತ್ಪೂರ್ಣ ಲೇಖನಗಳನ್ನು ಪ್ರಕಟಿಸಿದ್ದಾನೆ. ಹಾಗೆಯೆ ಸುಮಾರು 10 ಧಾರ್ಮಿಕ ಕೃತಿಗಳನ್ನು 37 ಧರ್ಮಸಂಬಂಧವಾದ ಮತ್ತು ಇತರ ಲೇಖನಗಳನ್ನು ಹೊರತಂದಿರುವುದಲ್ಲದೆ ಹಲವಾರು ಕವಿತೆಗಳನ್ನು ರಚಿಸಿದ್ದಾನೆ.			
(ಎಸ್.ಎಲ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ